Wednesday, 14 August 2024

ಮೈಲಾರ ಮಹಾದೇವ ನಾಟಕ 2024

ಮೈಲಾರ ಮಹದೇವ-ನಾಟಕ

ಮಾನ್ಯರೆ..

ಸಚಿವಾಲಯ ಕ್ಲಬ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಹತ್ವದ ಸ್ವಾತಂತ್ರ್ಯ ಹೋರಾಟಗಳಲ್ಲಿ ಒಂದಾದ ದಾಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರೊಂದಿಗೆ ಯಾತ್ರೆಯಲ್ಲಿ ಭಾಗವಹಿಸಿದ್ದ ಏಕೈಕ ಕನ್ನಡಿಗ ಹುತಾತ್ಮ ಮೈಲಾರ ಮಹದೇವ ಅವರ ಹೋರಾಟದ ಕಥೆಯುಳ್ಳ "ಮೈಲಾರ ಮಹದೇವ" ನಾಟಕ ವು ದಿನಾಂಕ:14.08.2024ರಂದು ಬುಧವಾರ ಅಪರಾಹ್ನ 1.30 ಕ್ಕೆ ಪ್ರದರ್ಶನಗೊಳ್ಳಲಿದೆ.

ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಳ್ಳುತ್ತೇನೆ.  

ಮಹೇಂದ್ರ ಎಂ.ವಿ 
ಸಾಂಸ್ಕೃತಿಕ ಹಾಗೂ ಹೊರಾಂಗಣ ಕ್ರೀಡಾ ಕಾರ್ಯದರ್ಶಿ
ಸಚಿವಾಲಯ ಕ್ಲಬ್


ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ 1911 ರಲ್ಲಿ ಹುಟ್ಟಿದ ಮೈಲಾರ ಮಹಾದೇವಪ್ಪನವರು ಕ್ರಾಂತಿಕಾರಿ ಮನೋಭಾವದವರು. ಆದರೂ, ಅಹಿಂಸಾ ತತ್ವದ ಗಾಂಧೀಜಿಯ ಅನುಯಾಯಿ.  ಹರ್ಡೇಕರ ಮಂಜಪ್ಪ‍ನವರಿಂದ ರಾಷ್ಟ್ರೀಯ ಭಾವನೆಯನ್ನು ಮೂಡಿಸಿಕಕೊಂಡ ಇವರು ಗಳಗನಾಥರ ಸಾಹಿತ್ಯ ಮತ್ತು ಲೋಕಮಾನ್ಯ ತಿಲಕರ ಲೇಖನಗಳಿಂದ ಪ್ರೇರಣೆ ಹೊಂದಿದವರು. ಖಾದಿ ಪ್ರಚಾರಕರು, ಗಾಂಧೀಜಿಯವರು ಪ್ರಾರಂಭಿಸಿದ ದಾಂಡಿ ಉಪ್ಪಿನ ಸತ್ಯಾಗ್ರಹ ಯಾತ್ರೆಯಲ್ಲಿ  ಭಾಗವಹಿಸಿದ ಅತಿ ಕಿರಿಯ ಮತ್ತು ಕರ್ನಾಟಕದ ಏಕೈಕ ವ್ಯಕ್ತಿ.  31.03.1943ರಂದು ಹೊಸರಿತ್ತಿಯ ಕಂದಾಯ ಕಚೇರಿಯ ಮೇಲೆ ದಾಳಿ ಮಾಡಿದಾಗ, ಹಿರೇಮಠ ವೀರಯ್ಯ  ಮಡಿವಾಳ ತಿರಕಪ್ಪನರೊಂದಿಗೆ ಪೊಲೀಸರಿಂದ ಹತರಾದ ಸ್ವಾತಂತ್ರ್ಯ   ಹೋರಾಟಗಾರರು.


ನಾವೀಗ ಸ್ವತಂತ್ರ್ಯ ಭಾರತದಲ್ಲಿದ್ದೇವೆ. 1947ಕ್ಕಿಂತ ಹಿಂದೆ ಭಾರತದ ಆಡಳಿತ ಬ್ರಿಟಿಷರ ಕೈಯಲ್ಲಿತ್ತು. ಬ್ರಿಟಿಷರಿಂದ ಭಾರತವನ್ನು ಬಿಡಿಸಿಕೊಳ್ಳಲು ಹಲವಾರು ಮಂದಿ ಹೋರಾಡಿದರು. ಮೋಹನದಾಸ ಕರಮಚಂದ ಗಾಂಧಿ ಅವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟವೇ ನಡೆಯಿತು. ಭಾರತದಾದ್ಯಂತ ಹಲವರು ಈ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದಲೂ ಹಲವಾರು ಜನ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಭಾಗವಹಿಸಿದರು. ಕೆಲವರು ಈ ಹೋರಾಟದಲ್ಲಿ ಹುತಾತ್ಮರೂ ಆದರು. ಹೀಗೆ ಹೋರಾಟಮಾಡಿ ಹುತಾತ್ಮರಾದವರಲ್ಲಿ ಒಬ್ಬರು ಮೈಲಾರ ಮಹಾದೇವ. ಅವರ ಜೀವನ ಚರಿತ್ರೆಯನ್ನು ನೀವಿಲ್ಲಿ ಕಾಣಬಹುದು. ಇವರೆಲ್ಲರ ಹೋರಾಟ ಮತ್ತು ತ್ಯಾಗದ ಫಲವಾಗಿ ನಮಗೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿತು. ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹಿರಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ.



ಭಾರತ ಬ್ರಿಟಿಷರ ಆಡಳಿತಕ್ಕೆ ಸೇರಿದ್ದ ಕಾಲ. ಅವರ ಆಡಳಿತದಿಂದ ಬಿಡಿಸಿಕೊಂಡು ಭಾರತವನ್ನು ಸ್ವತಂತ್ರವಾದ ದೇಶವನ್ನಾಗಿ ಮಾಡಲು ಹಲವಾರು ಭಾರತೀಯರು ಹೋರಾಟ ಮಾಡುತ್ತಿದ್ದರು.

ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಎಂಬುದೊಂದು ಹಳ್ಳಿ. ಆ ಹಳ್ಳಿಯಲ್ಲಿ ದೇಶಭಕ್ತರೊಬ್ಬರು ಭಾಷಣ ಮಾಡುತ್ತಿದ್ದರು. ಅವರ ಭಾಷಣದಲ್ಲಿ “ವಿದೇಶೀ ವಸ್ತ್ರಗಳನ್ನು ತ್ಯಜಿಸಿ ನಮ್ಮ ದೇಶದಲ್ಲೇ ತಯಾರು ಮಾಡಿದ ಬಟ್ಟೆಗಳನ್ನು ತೊಡಬೇಕು” ಎಂದೆಲ್ಲ ಹೇಳುತ್ತಿದ್ದರು. ಆ ಮಾತು ಕೇಳುತ್ತಿದ್ದ 8-10 ವರ್ಷದ ಒಬ್ಬ ಬಾಲಕ ತನ್ನ ತಲೆ ಮುಟ್ಟಿ ನೋಡಿದ. ಅವನ ತಲೆಯ ಮೇಲೆ ವಿದೇಶಿ ಟೊಪ್ಪಿಗೆ ಇತ್ತು. ಕೂಡಲೆ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆಸೆದ.


ಹೀಗೆ ಟೊಪ್ಪಿಗೆ ನೆಲಕ್ಕೆಸೆದ ಹುಡುಗನ ಹೆಸರು ಮೈಲಾರ ಮಹಾದೇವ. 8ನೆಯ ಜೂನ್ 1911ರಂದು ಮೋಟೆಬೆನ್ನೂರಿನಲ್ಲಿ ಜನಿಸಿದರು. ತಂದೆ ಮಾರ್ತಂಡಪ್ಪ, ಮಹಾದೇವನ ತಾಯಿ ಬಸಮ್ಮ ದೇಶಪ್ರೇಮಿ. ಆ ಹೊತ್ತಿಗೆ ಬ್ರಿಟಿಷರ ವಿರುದ್ಧ ಹೋರಾಡಿದ್ದ ಆ ತಾಯಿ ಜೈಲುವಾಸವನ್ನು ಅನುಭವಿಸಿದವರು. ಆ ತಾಯಿಗೆ ತಕ್ಕ ಮಗ ಮಹಾದೇವ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೋಟೆಬೆನ್ನೂರಿನಲ್ಲಿ ಮುಗಿಸಿದ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಹತ್ತಿರವಿದ್ದ ಹಂಸಭಾವಿಯ ಶಾಲೆಗೆ ಹೋದ. ಆದರೆ ಆತನಿಗೆ ಓದು ರುಚಿಸಲಿಲ್ಲ. ಸ್ವದೇಶೀ ಬಟ್ಟೆಗಳ ವಿಚಾರ ಯಾವಾಗಲೂ ಮನಸ್ಸಿನಲ್ಲಿ ಗುನುಗುಡುತ್ತಿತ್ತು. ಮಹಾತ್ಮಾ ಗಾಂಧೀಜಿ ಖಾದಿ ಬಟ್ಟೆಯ ಬಗೆಗೆ ಒಲವು ಹೊಂದಿದ್ದು, ಎಲ್ಲ ಕಡೆಯಲ್ಲೂ ಆ ವಿಚಾರ ಪ್ರಚಾರ ಮಾಡುತ್ತಿದ್ದರು. ಬಾಲಕ ಮಹಾದೇವನಿಗೆ ಖಾದಿ ಬಟ್ಟೆಯನ್ನು ಕುರಿತು ಪ್ರಚಾರಮಾಡಬೇಕೆಂಬ ಆಸೆ ಹೆಚ್ಚಾಯಿತು.

ಮಹಾದೇವ ಹನ್ನೆರಡು-ಹದಿಮೂರರ ಹರೆಯ. ವಿಜಯಪುರ ಜಿಲ್ಲೆಯಲ್ಲಿ ಕಲಾದಗಿ ಎಂಬ ಒಂದು ಗ್ರಾಮವಿದೆ. ಅಲ್ಲಿ ಆ ಕಾಲದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು. ಮಹಾದೇವ ಅಲ್ಲಿಗೆ ಹೋದ. ಅಲ್ಲಿ ಖಾದಿಯನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡ. ಖಾದಿಯನ್ನು ಹೊತ್ತು ಊರೂರು ತಿರುಗಿ ಮಾರಾಟ ಮಾಡಿದ. ಖಾದಿ ಬಳಕೆಯನ್ನು ಕುರಿತು ಪ್ರಚಾರವನ್ನೂ ನಡೆಸಿದ.

ಮಹಾದೇವ ಅವರಿಗೆ ಸಬರಮತಿ ಆಶ್ರಮದಿಂದ ಕರೆ ಬಂದಿತು. ಮಹಾದೇವ ಅಲ್ಲಿಗೆ ಹೋದರು. ಆ ವೇಳೆಗೆ ಪ್ರಸಿದ್ಧ ದಂಡಿ ಸತ್ಯಾಗ್ರಹ ನಡೆಯುತ್ತಿತ್ತು. ಗಾಂಧೀಜಿಯವರೊಡನೆ ದಂಡಿಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದವರಿಗೆ ಸೆರೆಮನೆ ವಾಸದ ಶಿಕ್ಷೆಯಾಯಿತು. ಮಹಾದೇವ ಆರು ತಿಂಗಳು ಸೆರೆಮನೆಯಲ್ಲಿ ಕಳೆದರು.

ದಂಡಿಯಾತ್ರೆ ಮುಗಿದು ಮಹಾದೇವ ಹುಟ್ಟೂರಿಗೆ ವಾಪಸ್ಸು ಬಂದರು. ಆ ಹೊತ್ತಿಗಾಗಲೇ ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ವಾತಂತ್ರ್ಯ ಸೇನಾನಿ ಎಂಬುದಾಗಿ ಅವರಿಗೆ ಹೆಸರು ಬಂದಿತ್ತು. ಊರಿನಲ್ಲಿ ಮಹಾದೇವ ಅವರಿಗೆ ಅದ್ದೂರಿಯ ಸ್ವಾಗತ ಸಿಕ್ಕಿತು.

ಮಹಾದೇವ ತಮ್ಮ ಹೆಂಡತಿ ಸಿದ್ದಮ್ಮ ಅವರನ್ನು ಸಿದ್ಧಮತಿ ಎಂದು ಕರೆಯುತ್ತಿದ್ದರು. ಸಬರಮತಿಯ ಸುಖವಾಸ ತನಗಷ್ಟೇ ಅಲ್ಲದೆ ಹೆಂಡತಿಗೂ ಆಗಬೇಕೆಂದು ಅವರನ್ನೂ ಸಬರಮತಿಗೆ ಕರೆದುಕೊಂಡು ಹೋದರು. ಅಲ್ಲಿ ಸಿದ್ದಮ್ಮ ಬ್ರಿಟಿಷ್ ಸರಕಾರಕ್ಕೆ ಅಸಹಕಾರ ನೀಡುವ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಊರಿಗೆ ಬಂದಿದ್ದ ಮಹಾದೇವ ಇಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಹಿಂಡಲಗಾ ಜೈಲಿನಲ್ಲಿದ್ದಾಗ ಗಾಂಧೀಜಿಯವರು ಅಲ್ಲಿಗೆ ಭೇಟಿ ನೀಡಿ ಮಹಾದೇವರನ್ನು ಕಂಡು ಅವರನ್ನು ಪ್ರೋತ್ಸಾಹಿಸಿದರು.

ಮಹಾದೇವರಿಗೆ ಜೈಲಿನಿಂದ ಬಿಡುಗಡೆಯಾಯಿತು. ಹಲವಾರು ಬಾರಿ ಜೈಲಿಗೆ ಹೋಗಿದ್ದರಿಂದ ದೇಹದ ಆರೋಗ್ಯದ ಬಗೆಗೆ ಅವರಿಗೆ ಕಾಳಜಿ ಉಂಟಾಯಿತು. ಶಿಸ್ತುಬದ್ಧವಾದ ವ್ಯಾಯಾಮವನ್ನು ಕಲಿಯಬೇಕೆನಿಸಿತು. ವ್ಯಾಯಾಮವನ್ನು ಕಲಿತರು. ವ್ಯಾಯಾಮ ಕಲಿಯುವಾಗಲೇ ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು. ಹಳ್ಳಿಗರ ಸೇವೆ ಮಾಡುವ ಉದ್ದೇಶದಿಂದ ಒಂದು ಸೇವಾಶ್ರಮವನ್ನು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಚರಕದಿಂದ ನೂಲು ತೆಗೆಯುವುದು, ಪ್ರಕೃತಿ ಚಿಕಿತ್ಸೆ, ವ್ಯಾಯಾಮ ಮುಂತಾದವುಗಳನ್ನು ಹಳ್ಳಿಯ ಜನರಿಗೆ ಅಭ್ಯಾಸ ಮಾಡಿಸಿದರು. ಸೇವಾಶ್ರಮದಲ್ಲಿ ತಯಾರಿಯಾಗುತ್ತಿದ್ದ ಖಾದಿಯನ್ನು ಊರೂರಿಗೆ ಕೊಂಡು ಹೋಗಿ ಮಾರಾಟ ಮಾಡಿದರು. ‘ಮಹಾದೇವನ ಖಾದಿ’ ಎಂದೇ ಇದು ಪ್ರಸಿದ್ಧಿಯಾಯಿತು. ಇದರ ಜೊತೆಯಲ್ಲಿ ಪತಿ-ಪತ್ನಿಯರ ಸ್ವಾತಂತ್ರ್ಯದ ತುಡಿತ, ಹೋರಾಟ ಜನಪ್ರಿಯವಾಯಿತು. ಊರಿನ ಜನರು ಇವರ ಗುಣಗಾನ ಮಾಡಿದರು.









































ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲ ಸಹೃದಯರಿಗೂ ಅನಂತ ಧನ್ಯವಾದಗಳು..🙏🙏

ಮಹೇಂದ್ರ ಎಂ.ವಿ
ಸಾಂಸ್ಕೃತಿಕ ಹಾಗೂ ಹೊರಾಂಗಣ ಕ್ರೀಡಾ ಕಾರ್ಯದರ್ಶಿ
ಸಚಿವಾಲಯ ಕ್ಲಬ್.